ಚೂಡಿ ಪೂಜೆ
First Published: 01 Sep
2013 02:00:00 AM IST
ದಕ್ಷಿಣ ಕರಾವಳಿ ಹಾಗೂ ಕೇರಳದ ಕೊಂಕಣಿ ಭಾಷಿಗರಲ್ಲಿ ಶ್ರಾವಣ ಮಾಸದಲ್ಲಿ ಚೂಡಿ
ಪೂಜೆ ಎಂಬ ವಿಶಿಷ್ಟ ಆಚರಣೆ ಇದೆ. ಮುಖ್ಯವಾಗಿ ಗೌಡ ಸಾರಸ್ವತ ಬ್ರಾಹ್ಮಣ, ಮರಾಠಿ ಬ್ರಾಹ್ಮಣರು
ಹಾಗೂ ಕೇರಳದ ಕೊಂಕಣಿ ಭಾಷಿಕ ಪ್ರದೇಶಗಳ ವಿವಾಹಿತೆಯರು ಆಚರಿಸುತ್ತಾರೆ.
ರಕ್ಕಸ ದೊರೆ ಜಲಂಧರನ ಪತ್ನಿ ವೃಂದಾ ಮಹಾನ್ ಪತಿವ್ರತೆ, ವಿಷ್ಣುವಿನ ಪರಮಭಕ್ತೆ
ಕೂಡ. ರಕ್ಕಸ ಜಲಂಧರನಿಂದ ದೇವತೆಗಳನ್ನು ರಕ್ಷಿಸಲು ವಿಷ್ಣು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ.
ಜಲಂಧರ ಸಾಯಬೇಕಾದರೆ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆಯಾಗಬೇಕು. ಜಲಂಧರ ಯುದ್ಧಕ್ಕೆ ಹೋದ ಸಂದರ್ಭ
ಉಪಯೋಗಿಸಿಕೊಳ್ಳುವ ವಿಷ್ಣು ಜಲಂಧರನ ವೇಷದಲ್ಲಿ ವೃಂದಾಳ ಬಳಿ ಬರುತ್ತಾನೆ. ಇದನ್ನು ತಿಳಿಯದ
ವೃಂದಾ ವಿಷ್ಣುವನ್ನು ತನ್ನ ಗಂಡನೆಂದೇ ತಿಳಿದು ಆತನೊಂದಿಗೆ ಕೂಡುತ್ತಾಳೆ. ಇತ್ತ ಯುದ್ಧಭೂಮಿಗೆ
ಹೋಗಿದ್ದ ಜಲಂಧರ ಮರಣ ಹೊಂದುತ್ತಾನೆ. ಪತಿಯ ಸಾವಿನ ಕಾರಣ ಅರಿತ ವೃಂದಾ ತುಂಬಾ ದುಃಖಿತಳಾಗಿ ತನ್ನ
ಆರಾಧ್ಯದೈವ ವಿಷ್ಣುವನ್ನು ಸ್ಮರಿಸಿ ತನ್ನನ್ನು ಮತ್ತೆ ಪವಿತ್ರಳನ್ನಾಗಿ ಮಾಡುವಂತೆ
ಬೇಡಿಕೊಳ್ಳುತ್ತಾಳೆ. ಆಗ ವಿಷ್ಣು ಶ್ರಾವಣ ಮಾಸದಲ್ಲಿ 11 ವಿಧದ ಹೂವುಗಳನ್ನು ನಾರಿನಿಂದ ಕಟ್ಟಿ
ತುಳಸಿಗೆ ಅರ್ಪಿಸಿ ತುಳಸಿ ದೇವಿಯನ್ನು ಪೂಜಿಸುವಂತೆ ಸಲಹೆ ನೀಡುತ್ತಾನೆ. ಅದರಂತೆ ವೃಂದಾ
ತುಳಸಿದೇವಿಯನ್ನು ಪೂಜಿಸಿ ಪವಿತ್ರಳಾಗುತ್ತಾಳೆ. ಇದು ಚೂಡಿಪೂಜೆ ಹಿಂದಿನ ಕತೆ.
ಪುರಾಣದಲ್ಲಿ ಉಲ್ಲೇಖಗೊಂಡಿರುವಂತೆ ಹನ್ನೊಂದು ಹೂವು ಈಗ ಲಭ್ಯವಿಲ್ಲದೆ
ಇರುವುದರಿಂದ ಮಹಿಳೆಯರು ಸ್ಥಳೀಯವಾಗಿ ಸಿಗುವ ನಾಲ್ಕರಿಂದ ಐದು ವಿವಿಧ ಹೂವು ಹಾಗೂ ಗರಿಕೆ
ಬಳಸುತ್ತಾರೆ. ಕೆಂಪು ಹಾಗೂ ಹಳದಿ ಬಣ್ಣಗಳಲ್ಲಿ ಸಿಗುವ ರತ್ನಗಂಧಿ, ಶಂಖಪುಷ್ಪ, ಗೌರಿಪುಷ್ಪ,
ಗರಿಕೆ ಹಾಗೂ ಇನ್ನಿತರ ಹೂಗಳನ್ನೆಲ್ಲ ಸೇರಿಸಿ ನಾರಿನಿಂದ ಕಟ್ಟಿದ ಹೂಗಳ ಗುಚ್ಚವನ್ನೇ 'ಚೂಡಿ'
ಎನ್ನಲಾಗುತ್ತದೆ. ಇಂಥ 9 ಗುಚ್ಛ ತಯಾರಿಸಿ ಮನೆಯ ಹಾಗೂ ನೆರೆಯ ಮಹಿಳೆಯರ ಜತೆ ವಿನಿಮಯ
ಮಾಡಿಕೊಳ್ಳುತ್ತಾರೆ.
ತುಳಸಿಕಟ್ಟೆ ಹಾಗೂ ಹೊಸ್ತಿಲನ್ನು ಶುಚಿಗೊಳಿಸಿ ರಂಗೋಲಿ, ಹೂಗಳಿಂದ ಅಲಂಕರಿಸಿ
ಆರತಿ ಮಾಡುವುದರೊಂದಿಗೆ ಪೂಜೆ ಆರಂಭಗೊಳ್ಳತ್ತದೆ. ಮನೆಯ ಮಹಿಳೆಯರು ತುಳಸಿ ಕಟ್ಟೆ ಮುಂದೆ
ಚೂಡಿಯನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಅಂತಿಮವಾಗಿ ದೇವರಕೋಣೆಯಲ್ಲಿ ಸಮೂಹ ಪ್ರಾರ್ಥನೆ
ನೆರವೇರಿಸಿ ಚೂಡಿಯನ್ನು ತಲೆಗೆ ಮುಡಿದುಕೊಳ್ಳುತ್ತಾರೆ. ಶ್ರಾವಣ ಮಾಸದ ಪ್ರತಿ ಶುಕ್ರವಾರ ಹಾಗೂ
ಭಾನುವಾರ ಈ ಚೂಡಿ ಪೂಜೆ ಮಾಡುತ್ತಾರೆ. ನವ ವಿವಾಹಿತೆಯರು ಮೊದಲು ಗಂಡನ ಮನೆಯಲ್ಲಿ ಚೂಡಿ ಪೂಜೆ
ಮಾಡಿ ಬಳಿಕ ತವರು ಮನೆಯಲ್ಲಿ ಪೂಜೆ ನೆರವೇರಿಸುತ್ತಾರೆ. ಈ ಪೂಜೆ ಮಾಡಿದರೆ ವಿವಾಹಿತ ಮಹಿಳೆಯರಿಗೆ
ಸಂಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.
ಚಿತ್ರಾ ಸಿ.ಆರ್.
No comments:
Post a Comment